ಕೊಳವೆ ಹುಳು

ಪ್ರಾಣಿಸಾಮ್ರಾಜ್ಯದ ಫೊರೋನಿಡ ಎಂಬ ವಿಭಾಗಕ್ಕೆ ಸೇರಿದ ಒಂದು ಕಡಲಜೀವಿ (ಟ್ಯೂಬ್ ವರ್ಮ್). ಸಣ್ಣ ಜಂತುಗಳನ್ನು ಹೋಲುತ್ತದೆ. ತಾನೇ ನಿರ್ಮಿಸಿಕೊಂಡ ಕೊಳವೆಯಲ್ಲಿ ಈ ಹುಳ ವಾಸಿಸುತ್ತದೆ. ಈ ಕೊಳವೆ ಸಮುದ್ರದ ತಳವನ್ನೋ ಇತರ ವಸ್ತುಗಳಿಗೆ ಅಂಟಿಕೊಂಡಿರುತ್ತದೆ. ಉಷ್ಣ ಮತ್ತು ಸಮಶೀತೋಷ್ಣವಲಯಗಳ ಆಳವಿಲ್ಲದ ಸಮುದ್ರಗಳಲ್ಲಿ. ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಸ್ಥಾನಮಾನದ ಬಗ್ಗೆ ಬಹಳ ದಿನಗಳವರೆಗೂ ಸರಿಯಾದ ಅರಿವು ಇರಲಿಲ್ಲ. ಹಿಂದೆ ಇದನ್ನು  ವಲಯವಂತ, ಮೃದ್ವಂಗಿ, ಕಾರ್ಡೇಟ ಮುಂತಾದ ವಿಭಾಗಗಳಲ್ಲಿ ಸೇರಿಸಲಾಗಿತ್ತು. ಆದರೆ ತನ್ನ ಕೆಲವು ವಿಶಿಷ್ಟ ರಚನೆಗಳಿಂದಾಗಿ ಮೇಲೆ ಹೇಳಿದ ಯಾವ ವಿಭಾಗದೊಂದಿಗೂ ಇದು ಸಮರ್ಪಕವಾಗಿ ಹೊಂದಿಕೊಳ್ಳುತ್ತಿರಲಿಲ್ಲ. ಇದರಿಂದಾಗಿ ಈಚೆಗೆ ಇದನ್ನೇ ಪ್ರತ್ಯೇಕ ವಿಭಾಗವೊಂದರಲ್ಲಿ ಸೇರಿಸಲಾಗಿದೆ.

	ಹೊರರಚನೆ : ದೇಹ ನೀಳವಾಗಿ ಹಲವು ಸೆಂಟಿಮೀಟರ್ ಉದ್ದವಾಗಿದೆ. ಇದು ಖಂಡಗಳಾಗಿ ವಿಭಾಗವಾಗಿಲ್ಲ. ಇದರ ಒಂದು ತುದಿಯಲ್ಲಿ ಎರಡು ಸುತ್ತುಗಳಲ್ಲಿರುವ ಸಂವೇದಿತಂತುಗಳಿವೆ (ಟೆಂಟಕಲ್ಸ್). ಇವುಗಳ ನಡುವೆ ಅರ್ಧಚಂದ್ರಾಕೃತಿಯ ಬಾಯಿ ಉಂಟು. ಎಪಿಸ್ಟೋಮ್ ಎಂಬ ಮಾಂಸದ ಮುಚ್ಚಳ ಬಾಯಿಯನ್ನು ಭಾಗಶಃ ಮುಚ್ಚಿಕೊಂಡಿದೆ. ತಂತುಗಳ ಮೇಲೆ ಸೂಕ್ಷ್ಮಗ್ರಾಹಿ ರೋಮಗಳಿವೆ. ತಂತುಗಳ ಬುಡದಲ್ಲಿ ಸಂಬಂಧಕ ಸ್ನಾಯುಗಳಿಂದಾದ ಲೊಫೋಫೋರ್ ಎಂಬ ಅಂಗವಿದೆ. ತಂತುಗಳ ಮೇಲಿನ ಕೂದಲುಗಳ ಚಲನೆಯಿಂದ ಉದ್ಭವಿಸುವ ಜಲಪ್ರವಾಹ ಬಾಯಿಗೆ ಆಹಾರ ವಸ್ತುಗಳನ್ನು (ತೇಲುವ ಏಕಾಣುಜೀವಿ) ಸೆಳೆದುಕೊಡುವುದರಲ್ಲಿ ಸಹಾಯಕವಾಗಿದೆ. ಮಲದ್ವಾರ ದೇಹದ ತುದಿಯಲ್ಲಿದೆ. ಬಾಯಿಯ ತಂತುಗಳ ಹೊರಗಡೆಯಿರುವ ಒಂದು ತೊಟ್ಟಿನ ತುದಿಯಲ್ಲಿದೆ.

	ಜೀರ್ಣಾಂಗ ಮತ್ತು ರಕ್ತಚಲನಾಂಗ : ಆಹಾರನಾಳ, ಜಠರ, ಕರುಳು, ಗುದನಾಳ-ಇವು ಜೀರ್ಣಾಂಗದ ಮುಖ್ಯ ಭಾಗಗಳು. ಇವಕ್ಕೆ ಸಂಬಂಧಿಸಿದ ಯಾವ ಬಗೆಯ ಗ್ರಂಥಿಗಳೂ ಇಲ್ಲ. ಅಫೆರೆಂಟ್ ಮತ್ತು ಎಫಿರೆಂಟ್ ಎಂಬ ಎರಡು ರಕ್ತನಾಳಗಳೇ ರಕ್ತಚಲನಾಂಗದ ಪ್ರಮುಖ ಭಾಗಗಳು. ಇವುಗಳಲ್ಲಿ ಒಂದು ಜೀರ್ಣಾಂಗಕೊಳವೆಗಳ ಮಧ್ಯದಲ್ಲೂ ಇನ್ನೊಂದು ಜೀರ್ಣಾಂಗ ಕೊಳವೆ ಮತ್ತು ದೇಹದ ಹೊರಹೊದಿಕೆಯ ನಡುವೆಯೂ ಇವೆ. ಇವೆರಡು ರಕ್ತನಾಳಗಳೂ ಲೋಫೋಫೋರಿನ ಬಳಿ ಕೂಡಿಕೊಂಡಿವೆ. ಇವೆರಡು ರಕ್ತನಾಳಗಳನ್ನು ಆವರಿಸಿಕೊಂಡು ಒಂದು ರಕ್ತ ಕುಹರವೂ, ರಕ್ತನಾಳಗಳಿಗೆ ಸೇರಿದಂತೆ ವ್ಯಾಸೊಪೆರಿಟೋನಿಯಲ್ ಮಾಂಸಖಂಡಗಳಿವೆ.

	ರಕ್ತದಲ್ಲಿ ಅಂಡಾಕಾರದ ರಕ್ತಕಣಗಳಿವೆ. ಕಣಬೀಜ ಮತ್ತು ಹೀಮೋಗ್ಲಾಬಿನ್ ಇರುವುದು ಕೊಳವೆ ಹುಳುವಿನ ರಕ್ತಕಣಗಳ ವಿಶೇಷ ಲಕ್ಷಣ.

	ದೇಹದ ಕುಹರ: ಸೀಲೋಮ್ ಎಂದು ಕರೆಯಲಾಗುವ ದೇಹದ ಪೊಳ್ಳಿನ ಭಾಗ ನಾಲ್ಕು ಮೀಸೆಂಟರಿಗಳಿಂದ ನಾಲ್ಕು ವಿಭಾಗವಾಗಿದೆ. ಮೀಸೆಂಟರಿಗಳು ಜೀರ್ಣಾಂಗಗಳಿಂದ ಆರಂಭವಾಗಿ ದೇಹದ ಹೊದಿಕೆಗೆ ಅಂಟಿಕೊಂಡಿವೆ. ತಂತುಗಳ ತುದಿಯ ದೇಹದ ಟೊಳ್ಳಿನಲ್ಲಿ ಒಂದು ಸಮತಲ ಮೀಸೆಂಟರಿ ಲೋಫೋಫೋರ್ ಕುಹರವನ್ನು ದೇಹದ ಇತರ ನಾಲ್ಕು ಕುಹರಗಳಿಂದ ಪ್ರತ್ಯೇಕಿಸುತ್ತದೆ. ದೇಹದ ಈ ಟೊಳ್ಳುಗಳಲ್ಲಿ ಒಂದು ದ್ರವ ತುಂಬಿದ್ದು ದೇಹ ಉಬ್ಬಿಕೊಂಡಿರುವಂತೆ ಮಾಡುತ್ತದೆ.

	ವಿಸರ್ಜನಾಂಗ: ಮಲದ್ವಾರದ ಇಕ್ಕೆಡೆಗಳಲ್ಲಿ ನೆಫ್ರೀಡಿಯ ಎಂಬ ವಿಸರ್ಜನಾಂಗಗಳಿವೆ. ಇವು ನುಲಿನಾಳಗಳ ಮೂಲಕ ದೇಹದ ಎರಡು ದೊಡ್ಡ ಟೊಳ್ಳುಭಾಗಗಳೊಡನೆ ಸಂಬಂಧಿಸಿದ್ದು ಇವುಗಳಿಂದ ವಿಸರ್ಜಿತವಾದ ವಸ್ತುವನ್ನು ಹೊರಹಾಕಲು ಸಹಾಯ ಮಾಡುತ್ತವೆ.

	ದೇಹದ ಹೊದಿಕೆಯಲ್ಲಿ ಎಪಿತೀಲಿಯಲ್ ಕಣಗಳ ಒಂದು ಪದರ ಮತ್ತು ಸ್ನಾಯು ತಂತುಗಳ ಎರಡು ಒಳಪದರುಗಳೂ ಇವೆ. ಇದರಲ್ಲಿ ಹೊರಗಿನದು ವೃತ್ತಸ್ನಾಯು ಮತ್ತು ಒಳಗಿನದು ಲಂಬಸ್ನಾಯು. ಎಪಿತೀಲಿಯಲ್ ಕಣಗಳು ಸ್ರವಿಸುವ ಒಂದು ದ್ರವದ ಸಹಾಯದಿಂದ ಹುಳು ತಾನು ವಾಸಿಸುವ ಕೊಳವೆ ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಸ್ರವಿಸಿದಾಗ ಪಾರದರ್ಶಕವಾಗಿ ಅಂಟುಅಂಟಾಗಿರುವ ಈ ದ್ರವ ನೀರಿನಸಂಪರ್ಕದಿಂದ ಗಟ್ಟಿಯಾಗುತ್ತದೆ. ಕೆಲವು ವೇಳೆ ಹಾಗೆ ನಿರ್ಮಿಸಿದ ಕೊಳವೆಗೆ ಮರಳು, ಚಿಪ್ಪು ಮುಂತಾದ ವಸ್ತುಗಳು ಅಂಟಿಕೊಳ್ಳುವುದುಂಟು. ಈ ಕೊಳವೆ ಮುಂಭಾಗದಲ್ಲಿ ಮುಚ್ಚಿದ್ದು, ಹಿಂಭಾಗದಲ್ಲಿ ತೆರೆದಿರುತ್ತದೆ. ಹಿಂಭಾಗದ ದ್ವಾರದಿಂದ ದೇಹವನ್ನು ಹುಳು ನೀಳವಾಗಿ ಚಾಚಬಲ್ಲದು.

	ನರಮಂಡಲ: ಎಪಿತೀಲಿಯಲ್ ಕಣದ ಸಾಲಿನ ಕೆಳಗೆ ನರಗಳ ಜಾಲದಂತೆ ನರಮಂಡಲ ಹರಡಿದೆ. ಲೋಫೋಫೋರ್ ಟೊಳ್ಳಿನೊಳಗಿರುವ ಮೀಸೆಂಟರಿಯೊಳಕ್ಕೆ ಈ ನರ ಜಾಲ ಮುಂದುವರಿದು, ಸಾಂದ್ರವಾಗಿ ಕೇಂದ್ರೀಕರಿಸಿದೆ. ಈ ಕೇಂದ್ರದಿಂದ ಹೊರಟು ದೇಹದ ಹೊದಿಕೆಯ ಮೇಲ್ತೊಕ್ಕಿನಲ್ಲಿ ಒಂದು ಅಥವಾ ಎರಡು ನೀಳವಾದ ದೊಡ್ಡ ನರಗಳು ದೇಹದ ಹಿಂತುದಿಯವರೆಗೂ ಮುಂದುವರೆಯುತ್ತವೆ. ಇವುಗಳ ಸಹಾಯದಿಂದ ಹುಳು ದೇಹವನ್ನು ಕೊಳವೆಯೊಳಕ್ಕೆ ಸೆಳೆದುಕೊಳ್ಳಲು ಸಾಧ್ಯವಾಗುತ್ತದೆ.

	ವಂಶಾಭಿವೃದ್ಧಿ: ಕೊಳವೆಹುಳು ದ್ವಿಲಿಂಗಿ. ಬಲಿತ ಅಂಡ ಮತ್ತು ವೀರ್ಯಾಣುಗಳು ದೇಹದ ಕುಹರಕ್ಕೆ ಬಿದ್ದು ನೆಫ್ರೀಡಿಯ ಕೊಳವೆಯ ಮೂಲಕ ಸಾಗಿ ಹೊರಬರುತ್ತವೆ. ನಿಶೇಚನ ಸಂವೇದಿ ತಂತುಗಳ ನಡುವೆ ನಡೆಯುತ್ತದೆ. ಫಲೀಕೃತಗೊಂಡು ಅಂಡಗಳು ಸಂವೇದಿತಂತುಗಳಲ್ಲೊ ಇಲ್ಲವೆ ಹೊರಗೆ ನೀರಿನಲ್ಲೋ ವೃದ್ಧಿಯಾಗುತ್ತವೆ. ಅನಂತರ ಅವುಗಳಿಂದ ನೀರಿನಲ್ಲಿ ಈಜಿಕೊಂಡು ಚಲಿಸುವ ಡಿಂಬ ಹೊರಬರುತ್ತವೆ. ಡಿಂಬಕ್ಕೆ ಆಕ್ಟಿನೊಟ್ರೋಕ ಎಂದು ಹೆಸರು. ಇದಕ್ಕೆ ರೋಮಗಳಿಂದ ಕೂಡಿದ ಸಂವೇದಿತಂತುಗಳ ಉಂಗುರವೂ ಬಾಯಿಯ ಮೇಲೆ ಮಾಂಸಖಂಡದ ಮುಚ್ಚಳವೂ ಇವೆ. ಡಿಂಬ ನೀರಿನಲ್ಲಿರುವ ಸೂಕ್ಷ್ಮ ತೇಲುಜೀವಿಗಳನ್ನು ಭಕ್ಷಿಸುತ್ತ ಇದ್ದು ಒಂದು ತಿಂಗಳ ನಂತರ ನೀರಿನ ತಳವನ್ನು ಸೇರಿ ರೂಪಪರಿವರ್ತನೆ ಹೊಂದಿ ಪ್ರೌಢಾವಸ್ಥೆ ತಲುಪುತ್ತದೆ. ಕೊಳವೆ ಹುಳುಗಳಲ್ಲಿ ಸಾಮಾನ್ಯವಾಗಿ ಮೇಲೆ ಹೇಳಿದಂತೆ ಲಿಂಗರೀತಿ ವಂಶಾಭಿವೃದ್ಧಿಯಾಗುವುದು. ಕೆಲವೊಮ್ಮೆ ತುಂಡಾದ ದೇಹಭಾಗ ಪುನಃಶ್ಚೇತನಗೊಂಡು ನಿರ್ಲಿಂಗ ರೀತಿಯಲ್ಲೂ ವಂಶಾಭಿವೃದ್ಧಿ ಮಾಡಬಹುದು. 								(ಬಿ.ಎಚ್.ಎಂ.)
ಪರಿಷ್ಕರಣೆ:
ಡಾ|| ಎನ್. ಎಸ್. ಲೀಲಾ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ